ಪ್ಲಿಬೀಯನ್ನರು

ಪ್ರಾಚೀನ ರೋಮನ್ ಸಮಾಜದ ಒಂದು ವರ್ಗದ ಜನ. ಇನ್ನೊಂದು ವರ್ಗದವರಾದ ಪಟ್ರೀಷಿಯನ್ನರು ಇವರಿಗಿಂತ ಪ್ರಬಲರು. ಪ್ಲಿಬೀಯನ್ನರದು ದಲಿತವರ್ಗ, ಸಾಮಾನ್ಯ ಜನವರ್ಗ, ಇವರು ಕ್ರಮೇಣ ತಮ್ಮ ಬಲವರ್ಧನೆ ಮಾಡಿಕೊಂಡು ರಾಜಕೀಯ ಹಕ್ಕುಗಳನ್ನು ಪಡೆದುಕೊಂಡರಲ್ಲದೆ ಸಾಮಾಜಿಕ ಆರ್ಥಿಕ ರಂಗಗಳಲ್ಲೂ ಪಟ್ರೀಷಿಯನ್ನರಂತೆಯೇ ತಮ್ಮ ಹಕ್ಕುಗಳನ್ನು ಸ್ಧಿರಪಡಿಸಿಕೊಂಡರು.

	ಪಟ್ರೇಷಿಯನ್ ಹಾಗೂ ಪ್ಲಿಬೀಯನ್ನರದು ವಿಶ್ವ ಇತಿಹಾಸದ ಪ್ರಥಮ ವರ್ಗ ಘರ್ಷಣೆಯೆಂದು ಹೇಳಲಾಗಿದೆ. ಕ್ರಿ.ಪೂ. 509ರಲ್ಲಿ ಗಣರಾಜ್ಯ ಸ್ಥಾಪನೆಯಾದಾಗ ಈ ಕಲಹಕ್ಕೆ ಒಂದು ಹೊಸ ತಿರುವು ಬಂತು. ಸುಮಾರು ಎರಡು ಶತಮಾನಗಳ ಕಾಲ ನಡೆದ ಈ ಹೋರಾಟದಿಂದಾಗಿ ರೋಮನ್ ನಾಗರಿಕರ ಎರಡು ವರ್ಗಗಳ ಮಧ್ಯೆ ಬೆಳೆದಿದ್ದ ಅಪಾರ ತಾರತಮ್ಯ ಅಳಿಸಿಹೋಯಿತು.

	ಪಟ್ರೀಷಿಯನ್ನರೂ ಪ್ಲಿಬೀಯನ್ನರೂ ಒಂದೇ ಜನಾಂಗದವರಾದರೂ ಪಟ್ರೀಷಿಯನ್ನರು ಅತ್ಯಂತ ಪ್ರಾಚೀನ ಬುಡಕಟ್ಟಿನವರೆಂದೂ ಪೇಟರ್ಸ್ ಎಂದೂ ಹೆಸರಾಗಿದ್ದರು. ಅಧಿಕಾರ, ಸಂಪತ್ತು, ಸಾಮಾಜಿಕ ಪ್ರತಿಷ್ಠೆ ಇವರ ಹಸ್ತಗತವಾಗಿದ್ದುವು. ಪ್ಲಿಬೀಯನ್ನರು ವ್ಯವಸಾಯ ಮತ್ತು ಶಾರೀರಿಕ ದುಡಿಮೆಯಿಂದ ಜೀವನ ನಡೆಸಿಕೊಂಡು ನಗರರಾಜ್ಯದ ಸೇನಾಬಲವಾಗಿದ್ದರು. ಇವರದು ಸಾಮಾನ್ಯ ಜನತೆಯಿಂದ ಕೂಡಿದ ವರ್ಗ. ಇವರಿಗೆ ಪೌರ ಹಕ್ಕುಗಳು ಇದ್ದವಾದರೂ ಪ್ರಾಚೀನ ಸಂಪ್ರದಾಯದಂತೆ ರೋಮ್ ನಗರರಾಜ್ಯದ ಉನ್ನತ ಅಧಿಕಾರ ಗೌರವಗಳನ್ನು ಇವರು ಪಡೆಯುವಂತಿರಲಿಲ್ಲ. ಇವರು ಪಟ್ರೀಷಿಯನ್ನರೊಂದಿಗೆ ವೈವಾಹಿಕ ಸಂಬಂಧ ಪಡೆಯುವಂತಿರಲಿಲ್ಲ. ಇವರು ಪಟ್ರೀಷಿಯನ್ನರೊಂದಿಗೆ ವೈವಾಹಿಕ ಸಂಬಂಧ ಬೆಳಸಲು ನಿಷೇಧವಿತ್ತು. ಶಾಸನ ಸಭೆಗಳಿಗೆ ಸದಸ್ಯರನ್ನು ಆರಿಸುವ ಹಕ್ಕು ಇವರಿಗಿದ್ದರೂ ಈ ಸದಸ್ಯರು ಅಲ್ಪ ಮತೀಯರಾಗಿದ್ದರು. ಅಭ್ಯರ್ಥಿಗಳನ್ನು ಪಟ್ರೀಷಿಯನ್ನರೇ ನೇಮಿಸಬೇಕಾಗಿತ್ತು. ಪಟ್ರೀಷಿಯನ್ ಕೌನ್ಸಲರುಗಳು ಸೂಚಿಸಿದ ಶಾಸನಗಳನ್ನೇ ಇವರು ಅಂಗೀಕರಿಸಬೇಕಾಗಿತ್ತಲ್ಲದೆ ಆ ಶಾಸನಗಳನ್ನು ಪಟ್ರೀಷಿಯನ್ನರ ಪ್ರತಿನಿಧಿಗಳಾದ ಪ್ರೇಟಾರುಗಳು ಅನುಮೋದಿಸಬೇಕಾಗಿತ್ತು. ಕಮೀಷಿಯ ಸಭೆಯನ್ನು ಪಟ್ರೀಷಿಯನ್ನರ ಪ್ರಭಾವವೇ ಅಧಿಕವಾಗಿತ್ತು.

	ಕ್ರಿ.ಪೂ. 287ರವರೆಗೆ ಪ್ಲಿಬೀಯನ್ನರು ನಡೆಸಿದ ಹೋರಾಟದ ನಡೆಸಿದ ಹೋರಾಟದ ಫಲವಾಗಿ ಕ್ರಮಕ್ರಮವಾಗಿ ಇವರಿಗೆ ಪೌರ ಹಕ್ಕುಗಳು ಪ್ರಾಪ್ತವಾದುವು. ಇವರು ಪ್ರತ್ಯೇಕ ಸಂಘವನ್ನು ರಚಿಸಿಕೊಂಡು, ಆಗಿಂದಾಗ್ಗೆ ಆಡಳಿತದಲ್ಲಿ ಸಹಕಾರವನ್ನು ಹಿಂತೆಗೆದುಕೊಂಡು ಪಟ್ರೀಷಿಯನ್ನರು ತಮಗೆ ಈ ಹಕ್ಕುಗಳನ್ನು ನೀಡುವಂತೆ ಮಾಡಿದರು. ಪ್ಲಿಬೀಯನ್ನರ ಸಂಘ ತನ್ನದೇ ಆದ ಸಭೆಗಳನ್ನು ನಡೆಸುತ್ತಿತ್ತು ತನ್ನವರೇ ಆದ ಅಧಿಕಾರಿಗಳನ್ನು ಆಯ್ಕೆಮಾಡುತ್ತಿತ್ತು. ಪ್ಲಿಬೀಯನ್ನರಲ್ಲಿ ಹೆಚ್ಚು ಅನುಕೂಲಸ್ಥರಾದವರು ಅಧಿಕಾರಿಗಳಾಗುತ್ತಿದ್ದರು. ಈ ಅಧಿಕಾರಿಗಳ ಆಜ್ಞೆಗಳು ಅನುಲ್ಲಂಘನೀಯವೆಂದು ಸ್ಥಾಪಿಸಿದ್ದು ಈ ಹೋರಾಟದ ಪ್ರಮುಖ ಸೌಧನೆಗಳಲ್ಲೊಂದು. ಪ್ಲಿಬೀಯನ್ನರ ಹೋರಾಟ ಕ್ರಿ.ಪೂ. 287ರಲ್ಲಿ ಕೊನೆಗೊಂಡಿತು. ಆ ವರ್ಷ ಕ್ವಿಂಟನ್ ಹಾರ್ಟೆನ್ಸಿಯಸ್ ಎಂಬ ಪ್ಲಿಬೀಯನ್ನನೊಬ್ಬ ಸರ್ವಾಧಿಕಾರಿಯಾಗಿ ನೇಮಕಹೊಂದಿದ. ಪ್ಲಿಬೀಯನ್ ಸಭೆಯಲ್ಲಿ ಸ್ವೀಕೃತವಾದ ಕ್ರಮಗಳಿಗೆ ಇಡೀ ಸಮುದಾಯವೇ ಬದ್ಧವೆಂದೂ ಅವು ಸೆನೇಟಿನ ಒಪ್ಪಿಗೆ ಪಡೆಯುವ ಆಗತ್ಯವಿಲ್ಲವೆಂದೂ ಅವನು ಕಾನೂನು ಮಾಡಿದ. ಅನಂತರದ ಗಣರಾಜ್ಯದಲ್ಲೂ ಪ್ಲಿಬೀಯನ್ ಎಂಬ ಪದ ಬಳಕೆಯಲ್ಲಿತ್ತಾದರೂ ಸಾಮಾನ್ಯ ಎಂಬ ಅರ್ಥದಲ್ಲಿ ಅದನ್ನು ಪ್ರಯೋಗಿಸಲಾಗುತ್ತಿತ್ತು. ಪ್ಲಿಬೀಯನ್ನರ ಪೌರತ್ವದ ವಿಚಾರದಲ್ಲಿದ್ದ ಕೊರತೆಗಳನ್ನು ತೊಡೆದು ಹಾಕಲಾಯಿತಾದರೂ ಅನಂತರವೂ ಒಂದಿಲ್ಲೊಂದು ರೀತಿಯಲ್ಲಿ ಸಾಮಾಜಿಕ ಅಂತಸ್ತುಗಳು ಮುಂದುವರಿದುವು.   						    (ಎಂ.ಎಸ್.ವಿ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ